ಕಂತು ವಿಕ್ರಯ   (ಇನ್ಸ್ಟಾಲ್ಮೆಂಟೆ ಸೇಲ್)  : ಗ್ರಾಹಕ ಕೊಂಡ ಪದಾರ್ಥದ ಕ್ರಯವನ್ನು ಒಂದು ಗೊತ್ತಾದ ಅವಧಿಯಲ್ಲಿ ಸಮಾನ ಕಂತುಗಳಲ್ಲಿ ಪಾವತಿ ಮಾಡಬಹುದೆಂದು ವ್ಯವಹಾರದ ಉಭಯ ಪಕ್ಷಗಳೂ ಸಮ್ಮತಿಸಿ, ಸಾಮಾನ್ಯವಾಗಿ ಪ್ರಥಮ ಕಂತನ್ನು ಕೊಟ್ಟ ಕೂಡಲೇ ಪದಾರ್ಥವನ್ನು ಗ್ರಾಹಕನಿಗೆ ಒಪ್ಪಿಸುವ ಮಾರಾಟ (ಇನ್ಸ್ಟಾಲ್ಮೆಂಟೆ ಸೇಲ್). ಬಾಡಿಗೆ ಕೊಳ್ಳಿಕೆಗೂ (ಹೈರ್ ಪರ್ಚೇಸ್) ಇದಕ್ಕೂ ಒಂದು ಮುಖ್ಯ ವ್ಯತ್ಯಾಸವುಂಟು (ನೋಡಿ-ಬಾಡಿಗೆ-ಕೊಳ್ಳಿಕೆ). ಈ ಒಪ್ಪಂದವಾದೊಡನೆಯೇ ಪದಾರ್ಥ ಗ್ರಾಹಕನ ಸ್ವತ್ತಾಗುತ್ತದೆ. ಆದರೆ ಬಾಡಿಗೆ ಕೊಳ್ಳಿಕೆಯಲ್ಲಿ ಹಾಗಲ್ಲ. ಅದರ ಪ್ರಕಾರ ಕೊಳ್ಳುವಿಕೆಯಲ್ಲಿ ಗ್ರಾಹಕ ಮೊದಲ ಕಂತನ್ನು ಕೊಟ್ಟು ಪದಾರ್ಥವನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವನಾದರೂ ಕೊನೆಯ ಕಂತು ಪಾವತಿ ಮಾಡುವವರೆಗೂ ಪದಾರ್ಥದ ಮಾಲೀಕತ್ವ ಮಾತ್ರ ಮಾರಾಟಗಾರನಲ್ಲೇ ಮುಂದುವರಿಯುತ್ತದೆ. ಪುರ್ಣವಾಗಿ ಕಂತು ಪಾವತಿಯಾಗದಿದ್ದರೆ ಅದುವರೆಗೆ ಗ್ರಾಹಕ ಕೊಟ್ಟ ಹಣವೆಲ್ಲ ಪದಾರ್ಥದ ಬಾಡಿಗೆಯೆನಿಸಿಕೊಳ್ಳುತ್ತದೆ. ಪದಾರ್ಥವನ್ನು ಮಾಲೀಕ ವಾಪಸ್ಸು ಪಡೆಯಬಹುದು.
ಕಂತು ವಿಕ್ರಯ ಪದ್ಧತಿಯಲ್ಲಿ ಮೊದಲ ಕಂತನ್ನು ಪಾವತಿಸಿದ ಕೂಡಲೇ ಕೊಳ್ಳುವವನು ವಸ್ತುವಿನ ಮಾಲೀಕನಾಗುವುದರಿಂದ ಈ ವ್ಯವಹಾರವನ್ನು ವ್ಯಾಪಾರವೆಂದೇ ಪರಿಗಣಿಸಬಹುದು. ಮುಂದೆ ಆತ ಉಳಿದ ಕಂತುಗಳನ್ನು ಕಟ್ಟದೆ ಹೋದರೆ ಆ ವಸ್ತುವಿನ ಮಾರಾಟಗಾರ ಕೊಂಡವನ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಬಹುದು.

ಎಲ್ಲ ವಸ್ತುಗಳೂ ಕಂತು ವಿಕ್ರಯ ಅಥವಾ ಬಾಡಿಗೆ ಕೊಳ್ಳಿಕೆಗೆ ಹೊಂದಿಕೊಳ್ಳುವುದಿಲ್ಲ. ಮೊದಲನೆಯದಾಗಿ ಆ ವಸ್ತು ಹೆಚ್ಚು ಬೆಲೆಯದಾಗಿರಬೇಕು, ಕಂತುಗಳ ಅವಧಿಗಿಂತ ಹೆಚ್ಚುಕಾಲ ಬಾಳುವಂತಿರಬೇಕು. ಆದ್ದರಿಂದ ಅಣೆಕಟ್ಟು (ಫರ್ನಿಚರ್), ಹೊಲಿಗೆ ಯಂತ್ರ, ಪಿಯಾನೊ, ಗ್ರಾಮೋಪೋನ್, ರೇಡಿಯೊ, ಮೋಟಾರ್ ಕಾರ್, ಬೆರಳಚ್ಚು ಯಂತ್ರ, ಶೀತಕ ಇತ್ಯಾದಿ ವಸ್ತುಗಳನ್ನು ಮಾತ್ರ ಈ ರೀತಿಯಲ್ಲಿ ಮಾರಬಹುದು.
ಕಂತು ವಿಕ್ರಯದ ಅಥವಾ ಬಾಡಿಗೆ ಕೊಳ್ಳಿಕೆಯ ಪ್ರಧಾನ ಗುಣಗಳೂ ಎರಡು : ಹೆಚ್ಚು ಬೆಲೆಯ ಪದಾರ್ಥಗಳನ್ನು ಒಂದೇ ಮೊತ್ತದಲ್ಲಿ ಹಣ ಪಡೆದು ಮಾರಾಟ ಮಾಡುವುದು ಕಠಿಣ. ಕಂತು ಸೌಲಭ್ಯ ಇರುವುದರಿಂದ ಇವನ್ನು ಮಾರುವುದು ಸುಲಭ. ಎರಡನೆಯದಾಗಿ ಇದರಿಂದ ಅನುಭೋಗಿಗಳಲ್ಲಿ ಉಳಿತಾಯಕ್ಕೆ ಪ್ರೋತ್ಸಾಹ ದೊರಕುತ್ತದೆ. ಏಕೆಂದರೆ ಕೊಂಡ ಪದಾರ್ಥಕ್ಕಾಗಿ ಕಂತು ಪಾವತಿ ಮಾಡಲು ಅನುಭೋಗಿ ತನ್ನ ವೆಚ್ಚ ತಗ್ಗಿಸುವುದು ಅಗತ್ಯವಾಗುತ್ತದೆ.

ಆದರೆ ಈ ಪದ್ಧತಿಗಳಲ್ಲಿ ಹಲವು ದೋಷಗಳೂ ಇವೆ : ಕೆಲವು ಜನರಿಗೆ ಹಣ ಉಳಿಸಲು ಮತ್ತು ಕಂತುಗಳನ್ನು ಸಲ್ಲಿಸಲು ಸಾಧ್ಯವಾಗದೆ ಹೋಗಬಹುದು. ಅಂಥ ಸಂದರ್ಭಗಳಲ್ಲಿ ಮಾರಾಟಗಾರನಿಗೆ ಸಲ್ಲಬೇಕಾದ ಕಂತುಗಳು ಸಲ್ಲದೆ ಆತ ನಷ್ಟ ಹೊಂದುತ್ತಾನೆ. ಜನ ತಮ್ಮ ಆದಾಯವನ್ನು ಮೀರಿದ ಜೀವನವನ್ನು ನಡೆಸಲು ಈ ಪದ್ಧತಿ ಉತ್ತೇಜಿಸಬಹುದು. ಏಕೆಂದರೆ ಒಂದು ಪದಾರ್ಥವನ್ನು ಈ ರೀತಿ ಕೊಂಡ ಒಡನೆಯೇ ಈಗಿನ ಅನುಕೂಲಕ್ಕಾಗಿ ಅನುಭೋಗಿ ತನ್ನ ಮುಂದಿನ ವರಮಾನವನ್ನು ಆಧಾರ ಮಾಡುತ್ತಾನೆ. ತಮ್ಮ ತಿಂಗಳ ವೇತನದ ಬಹುಭಾಗವನ್ನು ಕಂತು ಕಟ್ಟಲು ಉಪಯೋಗಿಸುವ ಅಮೆರಿಕನ್ ಸಂಸಾರಗಳು ಇದಕ್ಕೆ ನಿದರ್ಶನ.

ಅದೇನೇ ಇರಲಿ, ಈ ಪದ್ಧತಿಯನ್ನು ಬಹು ಜಾಣ್ಮೆಯಿಂದ ಉಪಯೋಗಿಸಿದರೆ ಮತ್ತು ಕೊಳ್ಳುವವರನ್ನು ಅತ್ಯಂತ ಜಾಗರೂಕತೆಯಿಂದ ಆರಿಸಿದರೆ, ಗ್ರಾಹಕ ವರ್ತಕರಿಬ್ಬರಿಗೂ ಇದು ಉಪಯುಕ್ತವಾಗುತ್ತದೆ.

ಕಂತು ವಿಕ್ರಯಕ್ಕಿಂತ ಬಾಡಿಗೆ ಕೊಳ್ಳಿಕೆ ಪದ್ಧತಿ ಈಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ. ಭಾರತದಲ್ಲೂ ಈಚೆಗೆ ಕಂತು ವಿಕ್ರಯವೂ ಬಾಡಿಗೆ ಕೊಳ್ಳಿಕೆಯೂ ಹೆಚ್ಚು ಬಳಕೆಗೆ ಬರುತ್ತಿವೆ. ಆದರೆ ಕಂತು ಪಾವತಿ ಮಾಡದಿದ್ದರೆ ಪದಾರ್ಥ ವಾಪಸು ಪಡೆಯಲು ಸಾಧ್ಯವಾಗದ-ಎಂದರೆ ಸೇವೆಯೇ ಪ್ರಮುಖವಾದ-ವ್ಯವಹಾರಗಳಲ್ಲಿ ಕಂತು ವಿಕ್ರಯ ಪದ್ಧತಿಯೇ ಉಳಿದುಕೊಂಡು ಬರುತ್ತಿದೆ. ಉದಾಹರಣೆ: ಕಂತುಗಳಲ್ಲಿ ಹಣ ಪಾವತಿ ಮಾಡಬಹುದಾದ ವಿಮಾನ ಪ್ರಯಾಣ ದರ.	(ಜೆ.ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ